ಈ ರಸ್ತೆ ಮಾಡುವವರಿಗೆ ಸ್ವಲ್ಪಾನೂ ಬುದ್ಧಿ ಇಲ್ವಾ?

ಬೆಂಗಳೂರಿನಲ್ಲಿ ಹೊಸೂರು ರಸ್ತೆ ಅತ್ಯಂತ ಹೆಚ್ಚು ವಾಹನ ಸಂಚಾರ ಇರುವ ರಸ್ತೆಗಳಲ್ಲಿ ಒಂದು. ಸಿಲ್ಕ್ ಬೋರ್ಡ್ ನಿಂದ ಎಲೆಕ್ಟ್ರಾನಿಕ್ಸ್ ಸಿಟಿವರೆಗೊಂತೂ ನಿಮಿಷಕ್ಕೆ ನೂರಾರು ಗಾಡಿಗಳು ಓಡಾಡುತ್ತವೆ. ಹೀಗಿದ್ದರೂ ಆ ರಸ್ತೆಯ ವ್ಯವಸ್ಥೆ ಅವ್ಯವಸ್ಥೆಯೇ ಸರಿ. 

ಸಿಲ್ಕ್ ಬೋರ್ಡನಿಂದ ಒಂದು ಎಲೆವೇಟೆಡ್ ರಸ್ತೆ ಇದೆ, ಇ-ಸಿಟಿ ವರೆಗೆ. ಒಮ್ಮೆ ಹೋಗಬೇಕೆಂದರೆ ೪೫ ರೂಪಾಯಿ ತೆತ್ತ ಬೇಕು. ನೂರಕ್ಕೆ ೫ ಜನರೂ ಅದನ್ನು ತೆಗೆದುಕೊಳ್ಳೋದಿಲ್ಲ. ಕೆಳಗಿನ ರಸ್ತೆಯೋ, ಕಿ.ಮಿ ಗೊಂದು ಸಿಗ್ನಲ್. ಇ-ಸಿಟಿಯ ಮುಂದೆ ಇರುವ ಸಿಗ್ನಲ್ ಅಂತೂ ಅದ್ವಾನ. ನೈಸ್ ರೋಡ್ ನಿಂದ ಬಂದು ಸೇರುವ ಗಾಡಿಗಳು ಸರ್ವಿಸ್ ರಸ್ತೆ ಯಲ್ಲಿ ಬಂದು ನಿಲ್ಲಬೇಕು. ೫ ನಿಮಿಷಕ್ಕೆ ಒಮ್ಮೆ ೩೦-೪೦ ಸೆಕೆಂಡ್ ನಷ್ಟು ಸಮಯ ಸಿಗುತ್ತದೆ. ಇ-ಸಿಟಿಯ ಆ ಒಂದು ಸರ್ಕಲ್ ದಾಟಲಿಕ್ಕೆ ಬೆಳಗ್ಗಿನ ಹೊತ್ತು ಕನಿಷ್ಠ ೧೫ ನಿಮಿಷ ಬೇಕು.

ಇನ್ನೆರಡು ವರ್ಷದಲ್ಲಿ ಆ ಸಿಗ್ನಲನ್ನು ನಿಭಾಯಿಸಲಿಕ್ಕೆ ಆಗಲಿಕ್ಕಿಲ್ಲ. ಆಗೇನು ಮಾಡುತ್ತಾರೆ? ಓವರ್ ಪಾಸ್ ಜೊತೆ ಅಂಡರ್ ಪಾಸ್ ಕೂಡ ಕಟ್ತಾರೋ ಏನೊ! 

ಪ್ರತಿ ಸಿಗ್ನಲ್ ನಲ್ಲೂ ಪ್ರತಿ ದಿಕ್ಕಿನಿಂದ ವಾಹನಗಳನ್ನು ಬಿಡಲೇಬೇಕೆ? ಪಕ್ಕದ ರಸ್ತೆಗಳನ್ನು ಬಂದ್ ಮಾಡಿ, ಮುಂದೆ ಹೋಗಿ ಯೂ-ಟರ್ನ್ ಹೊಡೆದು ಬನ್ನಿ ಎಂದರೆ ಆಗೋಲ್ವೇ? ತಲೆನೇ ಇಲ್ದೇ ಇರೋ ಜನ ರಸ್ತೆ ನಿಭಾಯಿಸಿಲಿಕ್ಕೆ ಹೊರಟ್ರೆ ಇನ್ನೇನಾಗುತ್ತೆ ಬಿಡಿ.

ಅಜ್ಜನ ಮಾತನ್ನು ಸ್ವಲ್ಪ ಕೇಳೋಣ

ಎಸ್ ಎಲ್ ಭೈರಪ್ಪನವರ ಕನ್ನಡ ಅಭಿಮಾನದ ಬಗ್ಗೆ ಯಾರಿಗೂ ಯಾವ ರೀತಿಯ ಸಂಶಯ ಇಲ್ಲ. ಕನ್ನಡಕ್ಕೆ ಅವರ ಸೇವೆ – ಅದೊಂತೂ ಅದ್ಭುತ. ಹೀಗಿರುವಾಗ ಅವರು ಕನ್ನಡಿಗರ ಬಗ್ಗೆ ನೊಂದ ಮನಸ್ಸಿನಿಂದ ಏನೋ ಒಂದೆರೆಡು ಮಾತು ಹೇಳಿದ್ದಾರೆ ಅಂದರೆ ಅದರ ಬಗ್ಗೆ ಅತಿರೇಕವಾದ ಪ್ರತಿಕ್ರಿಯ ಉಚಿತವಲ್ಲ.

ಮನೆಯಲ್ಲಿ ನಮ್ಮ ಅಜ್ಜ ನಾವು ಆಚೆ ಹೋಗಿ ಬರೇ ಆಟ ಆಡುತ್ತಾ ಕಾಳ ವ್ಯರ್ಥ ಮಾಡಿ ಓದದೆ ಇದ್ದಾಗ ನಮಗೆ ನಾಲ್ಕು ಬೈದು, ಬುದ್ಧಿಮಾತು ಹೇಳಿ, ತರ್ಲೆತನ ಬಿಡು, ಪಕ್ಕದ ಮನೆಯ ಹುಡುಗನ್ನನು ನೋಡು, ಅವನ ಹಾಗೆ ಓದು ಎಂದು ತಿಳಿ ಹೇಳಿದರೆ, ಅಜ್ಜನನ್ನೇ ಬೈಯ್ಯುವೆವಾ? ಅಥವಾ ಅಜ್ಜ ನೀನು ಕ್ಷಮೆ ಯಾಚಿಸಿದರೆ ಸರಿ, ಇಲ್ಲಾಂದರೆ ಏನ್ ಮಾಡ್ತೇನೆ ನೋಡು ಎಂದು ಬೆದರಿಸ್ತೀವಾ?

ಈ ಪರಿಸ್ಥಿತಿಯೂ ಹಾಗೆ. ಭೈರಪ್ಪನವರು ನಮ್ಮ ಕನ್ನಡ ಕುಟುಂಬದ ಹಿರಿಯ ಅಜ್ಜ. ಅವರು ನೊಂದು ಎರಡು ಬುದ್ಧಿ ಮಾತು ಹೇಳಿದ್ದಾರೆ ಎಂದರೆ ನಮ್ಮಲ್ಲಿ ಏನೋ ದೊಡ್ಡದಾದ (ತಪ್ಪು) ಬೆಳವಣಿಗೆಯನ್ನು ಕಂಡಿದ್ದಾರೆ ಎಂದರ್ಥ. ಅದೇನೆಂದು ಕೇಳಿ ತಿಳಿಯೋಣ. ಸರಿ ಪಡಿಸಿಕೊಳ್ಳೋಣ. ಅವರ ಕೈಯಲ್ಲೇ ಶಭಾಷ್ ಎನಿಸಿಕೊಳ್ಳೋಣ. ಅದು ಬಿಟ್ಟು ಅವರಲ್ಲೇ ಕ್ಷಮೆಯಾಚಿಸುವಂತೆ ಬೆದರಿಕೆ ಹಾಕುವ ದುರ್ಬುದ್ಧಿ ಬೇಡ!

 

ಕನ್ನಡಕ್ಕೆ ಕನ್ನಡಿಗರ ಉದಾರತನವೇ ಕುತ್ತು

ವಾರಕ್ಕೆ ೨-೩ ಬಾರಿ ನಾನು ದೇವರ ಪೂಜೆಗೆ ಹೂವು, ತುಲಸಿ ಖರೀದಿಸುತ್ತೇನೆ. ನೆನ್ನೆ ಹೂವು ಮಾರುವವಳ ಬಳಿ ತುಂಬಾ ಗ್ರಾಹಕರಿದ್ದ ಕಾರಣ ಕೊಂಚ ಕಾಯಬೇಕಾಯಿತು. ಆಗ ಗಮನಿಸಿದ ಒಂದು ಅಂಶ ನನ್ನನ್ನು ಆಲೋಚಿಸುವಂತೆ ಮಾಡಿತು.

ಹೂವು ಮಾರುವವಳು ಕನ್ನಡದವಳು. ಸ್ಥಳ ಬೆಂಗಳೂರು. ಆದರೂ ಖರೀದಿಸುವವರನ್ನು ನೋಡಿ ಅವರ ಭಾಷೆಯಲ್ಲೇ ಮಾತನಾಡುವ ಪ್ರಯತ್ನ ನಡೆಸುತ್ತಿದ್ದಳು. ಒಂದು ಬೆಂಗಾಳಿ ಹೆಂಗಸಿನೋಟ್ಟಿಗೆ ಅವಳ “ಹಿಂದಿ” ಸಂಭಾಷಣೆ ಕೇಳಿ ನನಗೆ ನಗೆ ತಡೆದುಕೊಳ್ಳುವುದು ಕಷ್ಟವಾಯಿತು. ಇನ್ನೊಂದು ಗ್ರಾಹಕನ ಒಟ್ಟಿಗೆ ನಡೆಸಿದ ತೆಲುಗು ಸಂಭಾಷಣೆ ನನಗೆ ತಲೆ ಬುಡ ಅರ್ಥವಾಗಲಿಲ್ಲ. ಆ ಗ್ರಾಹಕನ ಪಾಡು ನನ್ನಂತೆಯೇ ಇದ್ದದ್ದು ನೋಡಿ ಸ್ವಲ್ಪ ಸಮಾಧಾನವಾಯಿತು :)

ಕೆಲವೊಮ್ಮೆ ಪರಿಸ್ಥಿತಿಗೆ ಮಣಿದು ಪರ ರಾಜ್ಯಾ ಭಾಷೆಯನ್ನು ನಾವು ಬಳಸಬೇಕಾಗಬಹುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾರಾದರೂ ವಾಹನ ನಿಲ್ಲಿಸಿ ಬೇರೆ ಭಾಷೆಯಲ್ಲಿ ಜಾಗ ವಿಚಾರಿಸಿದರೆ ಬಹುಷ ಬೇರೆ ಊರಿನಿಂದ ಬಂದವರು ಎಂದುಕೊಂಡು ಸಹಾಯ ಮಾಡುವ ಉದ್ದೇಶದಿಂದ ಅವರಿಗೆ ಅರ್ಥೈಸುವ ಪ್ರಯತ್ನ ಮಾಡಿದರೆ ತಪ್ಪಿಲ್ಲ ಎಂದು ಭಾವಿಸುತ್ತೇನೆ. ಆದರೆ ನಮ್ಮದೇ ಊರು, ನಮ್ಮದೇ ಗಲ್ಲಿ, ಬೇರೆ ವಿಧಿಯಿಲ್ಲದ ಗ್ರಾಹಕರು, ಹೀಗಿದ್ದರೂ ನಮ್ಮ ಜನರೇ ಅನ್ಯ ಭಾಷಾ ಪ್ರಯೋಗ ಮಾಡುತ್ತಾರೆ ಎಂದರೆ ಏನು ಹೇಳೋನ?

ನನ್ನ ಪ್ರಕಾರ ನಮ್ಮ ಭಾಷೆ ಕೀಳು, ಬೇರೆ ಭಾಷೆಗಳು ನಮ್ಮದಕ್ಕಿಂತ ಉತ್ತಮ ಎಂಬ ತಪ್ಪು, ಆದರೆ ಗಾಢವಾದ, ನಂಬಿಕೆ ನಮ್ಮ ಜನರಲ್ಲಿ ಬಂದು ಬಿಟ್ಟಿದೆ. ಬಹುಷ ಬೇರೆ ಊರಿನಿಂದ ಬಂದ ಜನ, ಒಳ್ಳೆಯ ಉದ್ಯೋಗ ಪಡೆದು, ಒಳ್ಳೆಯ ಸಂಬಳ ಗಿಟ್ಟಿಸಿಕೊಂಡು, ಆರಾಮವಾಗಿ ಮಜ ಮಾಡುವದನ್ನು ನೋಡಿ, ಬೇರೆ ಏನೂ ವ್ಯತ್ಯಾಸ ಕಂಡು ಹಿಡಿಯಲಾರದೆ ಭಾಷೆಯಿಂದಲೇ ಅವರಿಗೆ ಉತ್ತಮತ್ವ ಬಂದಿರಬೇಕೆ ಎಂಬ ತಪ್ಪು ಕಲ್ಪನೆ ಇದೆಯೋ ಏನೋ.

ಕನ್ನಡದವರೇ ಆದ, ಉತ್ತಮ ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಾನಮಾನ ಇರುವ ಜನರು, ಇಂಥಾ ಪರಿಸ್ಥಿತಿಯಲ್ಲಿ ಮುಂದೆ ಬಂದು ಕನ್ನಡದ ಬಗ್ಗೆ, ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ಹೆಮ್ಮ ಮತ್ತು ಪ್ರೀತಿಯನ್ನು ಪ್ರದರ್ಶಿಸಬೇಕು. ಅವರ ಗಾಳಿ ಈ ಕಳವಳ ಮನಸ್ಥಿತಿಯಲ್ಲಿರುವ ಜನರಿಗೆ ತಾಗಿದರೆ ಕೊಂಚ ರೋಗ ಪರಿಹಾರ ಆಗಬಹುದೋ ಏನೋ?

 

ವೋಲ್ವೋದಲ್ಲಿ ಕನ್ನಡ

ಬೆಂಗಳೂರಿನಲ್ಲಿ ಇತ್ತೀಚೆಗೆ ಬಿ.ಎಮ್.ಟಿ.ಸಿಯವರು ಬಸ್ ದಿನ ಅಂತ ಒಂದು ಕಾರ್ಯಕ್ರಮ ಪ್ರಾರಂಭಿಸಿದ್ದಾರೆ. ಪ್ರತಿ ತಿಂಗಳ ನಾಲ್ಕನೆಯ ತಾರೀಖಿನಂದು ಎಲ್ಲರೂ ಬಸ್ ನಲ್ಲಿ ಸಂಚರಿಸಬೇಕೆಂದು ಉತ್ತೇಜಿಸುತ್ತಾರೆ. ಇದೊಂದು ಶ್ಲ್ಯಾಘ್ಯ ಕೆಲಸ.
ಬೆಂಗಳೂರಿನ ವೋಲ್ವೋ ಬಸ್ ನಲ್ಲಿ ಸಂಚರಿಸುವವರಲ್ಲಿ ಸುಮಾರು ಜನ ಕನ್ನಡ ತಿಳಿಯದವರು ಇದ್ದಾರೆ. ಅವರಿಗೆ ವ್ಯಾವಹಾರಿಕ ಕನ್ನಡ ಕಲಿಸುವ ಸಾಧನ ಈ ವೋಲ್ವೋ ಬಸ್ ಗಳೆ ಎಂದು ನನ್ನ ಅನಿಸಿಕೆ. ಯಾವಾಗ ನೋಡಿದರು ಸಿನಿಮಾ ಹಾಡು ಪ್ರಸಾರಿಸುವ ರೇಡಿಯೋ ಚ್ಯಾನೆಲ್ ಹಾಕುತ್ತಾರೆ, ಈ ಬಸ್ಗಳಲ್ಲಿ. ಅದರ ಬದಲು ಸರಳ ಕನ್ನಡ ಕಲಿಸುವ ಕಾರ್ಯಕ್ರಮಗಳನ್ನು ತಯಾರು ಮಾಡಿ ಗಂಟೆಗೆ ೨-೩ ಬಾರಿಯಾದರೂ ಸಿ.ಡಿ ಮೂಲಕ ಹಾಕಬಹುದು. ಕುಳಿತ ಕನ್ನಡೇತರರಲ್ಲಿ ಕೆಲವರಾದರೂ ಖಂಡಿತ ಕಲಿಯುತ್ತಾರೆ.  ಭಾಷೆಯ ಮೇಲೆ ಇರುವ ಅಭಿಮಾನವನ್ನು ಈ ರೀತಿ ಉಳಿಸಿ ಬೆಳೆಸ ಬಹುದು.
ಯಾವಾಗಲೂ ಗಲಾಟೆ ಮಾಡುತ್ತಾ, ಹಿಂಸಾಚಾರಕ್ಕೆ ಇಳಿಯುತ್ತಾ, ಕನ್ನಡಿಗರಿಗೂ ಸೇರಿ ಎಲ್ಲರಿಗೂ ತೊಂದರೆ ಮಾಡುವ ನಮ್ಮ “ರಕ್ಷಣಾ ಪಡೆಗಳು” ಇದರ ಬಗ್ಗೆ ಏನನ್ನುತ್ತಾರೋ?

 

Follow

Get every new post delivered to your Inbox.